Tuesday, July 14, 2009

ಧರ್ಮದ ಗೋಡೆ ಒಡೆದು "ದೇವರಿಲ್ಲ" ಎಂದು ಸಾರಿದ!

We should have religion but not God!

ಈ ಮಾತುಗಳನ್ನು ಈಗ ಹೇಳಿದರೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಆದರೆ, ೧೯ನೇ ಶತಮಾನದ ಆರಂಭ ಕಾಲದಲ್ಲಿ, ಜಗತ್ತಿನಾದ್ಯಂತ ಜಾತಿ, ಧರ್ಮಗಳ ನಂಬಿಕೆ ಆಳವಾಗಿ ಜನರ ನಸ್ಸನ್ನು ಆವರಿಸಿದ್ದ ಕಾಲದಲ್ಲಿ ಇದೇ ಮಾತುಗಳು ಜನರ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು.

"ಸಾಂಪ್ರದಾಯಿಕ ಧರ್ಮಗಳು ಅರ್ಥಹೀನ ತತ್ವಗಳಿಂದ, ಮೂಢನಂಬಿಕೆ, ಕಂದಾಚಾರಗಳಿಂದ ತುಂಬಿದ್ದು ಸತ್ವಹೀನವಾಗಿವೆ. ಅವು ಪೋಷಿಸಿಕೊಂಡು ಬಂದ ಹಳೆಯ ದೇವರುಗಳು ತಮ್ಮ ಪೀಠದಿಂದ ಪದಚ್ಯುತರಾಗುತ್ತಾರೆ..."

ಇಂಥ ಮಾತುಗಳನ್ನು ಕೇಳಿ ಸಹಿಸುವುದೆಂತು? ಜನತೆ, ಪ್ರಕಾಂಡ ಪಂಡಿತರು, ಶ್ರೇಷ್ಠ ವಿಜ್ಞಾನಿಗಳ ನಂಬಿಕೆಯ ಭದ್ರ ಬುನಾದಿ ಅಲುಗಾಡಿದ್ದೇ ಆಗ. ಅರ್ಥಹೀನ ತತ್ವಗಳನ್ನು ಜನರ ಮನಸ್ಸಿನಲ್ಲಿ ತುಂಬಿ ಸಮಾಜ ಒಡೆಯುವ ಹುನ್ನಾರವಿದು ಎಂದರು.

ಆದರೆ ಅವನು ಮಾತ್ರ ಎದೆಗುಂದಲಿಲ್ಲ. ಯಾರ ಟೀಕೆಗಳಿಗೂ ಕಿವಿಯಾಗಲಿಲ್ಲ. ತನ್ನ ಸಿದ್ಧಾಂತಗಳನ್ನು ಛೇಡಿಸುವವರ ಬರಹಗಳಿಗೆ ಕಣ್ಣಾಗಲಿಲ್ಲ. ಅಸಹನೀಯ ಒಂಟಿತನವನ್ನೇ ಅನುಭವಿಸಿದವನಿಗೆ ಯಾರ ಹಂಗೂ ಬೇಕಿರಲಿಲ್ಲ. "ದೇವರು ಎಂಬಾತ ಮನುಷ್ಯನ ಅಜ್ಞಾನವನ್ನು ಆಶ್ರಯಿಸಿ ಜೀವಿಸಿದ್ದಾನೆ" ಎಂದು ಘಂಟಾಘೋಷವಾಗಿ ಸಾರಿ ಹೇಳಿದ. ಅಷ್ಟೆ ಅಲ್ಲ, ತನ್ನ ಸಿದ್ಧಾಂತಗಳನ್ನು ಕಾರ್ಯಗತಗೋಳಿಸಿಯೇಬಿಟ್ಟ, "Religion of humanity" ಎನ್ನುವ ಹೊಸ ಧರ್ಮದ ಹರಿಕಾರನಾದ...

ಅವನೇ ಆಗಸ್ಟ್ ಕೋಮ್ಟ್! ಫ್ರಾನ್ಸಿನ ಮಹಾನ್ ತತ್ವಜ್ಞಾನಿ, ಉದಾತ್ತ ಚಿಂತಕ, ಉತ್ಕೃಷ್ಟ ಬರಹಗಾರ, ಶ್ರೇಷ್ಠ ನೀತಿತತ್ವಜ್ಞ. ಬೌದ್ಧಿಕತೆ ಮತ್ತು ವೈಜ್ಞಾನಿಕತೆಗಳಿಗೆ ಆರಂಭದಿಂದಲೂ ಪ್ರಾಮುಖ್ಯತೆ ನೀಡುತ್ತ ಬಂದವನು. "The positive philosophy" ಎನ್ನುವ ಮಹೋನ್ನತ ಕೃತಿಯ ಕರ್ತೃ. ಸಮಾಜಶಾಸ್ತ್ರದ ಪಿತಾಮಹ.

ಹುಟ್ಟಿದ್ದು ೧೭೯೮ ಜನವರಿ ೧೭. ಸ್ಥಳ ಫ್ರಾನ್ಸಿನ ಮೌಂಟ್ ಪೆಲಿಯರ್. ತಂದೆ ಸರ್ಕಾರಿ ಅಧಿಕಾರಿ. ತಾಯಿ ಮಹಾನ್ ದೈವಭಕ್ತೆ. ಆರಂಭದಿಂದಲೂ ವಿಚಾರಶಕ್ತಿ, ಕ್ರಿಯಾಶೀಲತೆ ಪ್ರಕಟಪಡಿಸುತ್ತಲೇ ಬಂದ ಕೋಮ್ಟ್ ತನ್ನ ಹೆತ್ತವರ ಧರ್ಮನಿಷ್ಠೆ, ರಾಜನಿಷ್ಠೆಗೇ ವಿರುದ್ಧವಾಗಿ ನಿಂತ. ಪ್ರತಿಷ್ಠಿತ ಇಕೋಲ್ ಪಾಲಿಟೆಕ್ನಿಕ್ ನಲ್ಲಿ ಸೀಟು ಗಿಟ್ಟಿಸಿಕೊಂಡರೂ, ಅಲ್ಲಿನ ಪ್ರಾಧ್ಯಾಪಕರೊಬ್ಬರ ವಿರುದ್ಧವೇ ದಂಗೆ ಎದ್ದು, ಮುಷ್ಕರ ಹೂಡಿ ಶಾಲೆಯನ್ನೇ ಮುಚ್ಚುವ ಸ್ಥಿತಿಗೆ ತಂದಿಟ್ಟ. ಓದನ್ನೂ ಅಲ್ಲಿಗೇ ಅನಿವಾರ್ಯವಾಗಿ ಮುಗಿಸಬೇಕಾಯಿತು.

ಶಾಲೆ ಬಿಟ್ಟರೂ ಆಗಿನ ಪ್ರಸಿದ್ಧ ಸಮಾಜವಾದಿ ಚಿಂತಕ ಸೈಂಟ್ ಸೈಮನ್ನನ ಸಖ್ಯ ದೊರೆಯಿತು. ೧೬ನೇ ವಯಸ್ಸಿನಲ್ಲೇ ಸೈಮನ್ನನ ಕಾರ್ಯದರ್ಶಿಯಾಗಿ, ಸಹಚಿಂತಕನಾಗಿ ದುಡಿದ. ಇದು ಕೋಮ್ಟ್ ನಿಗೆ ಸ್ಫೂರ್ತಿಯಾಯಿತು. ಆದರೆ ಸೈಮನ್ನನ ಸಿದ್ಧಾಂತಗಳು ಕೋಮ್ಟ್ ನ ವಿಚಾರಗಳ ಮೇಲೆ ಬಲವಾದ ದಾಳಿ ನಡೆಸಿದ್ದರ ಫಲವಾಗಿ ಆತನಿಂದ ದೂರಾದ.

ಮದುವೆಯೂ ಆಯಿತು. ಕೆಲವು ವರ್ಷಗಳಲ್ಲಿ ಅದೂ ಮುರಿದುಬಿತ್ತು. ಕೊಟಿಲ್ದವಾ ಎಂಬಾಕೆಯ ಸ್ನೇಹ ಸಂಪಾದಿಸಿದರೂ ಅವಳೂ ಮರಣ ಹೊಂದಿದಳು. ಕೋಮ್ಟ್ ಭಯಂಕರ ಓಂಟಿತನಕ್ಕೆ ತುತ್ತಾದ. ಆ ಏಕಾಂತದಲ್ಲಿ ಹುಟ್ಟಿದ್ದು ಪ್ರಪಂಚವನ್ನೇ ಬದಲಿಸುವ ಶಕ್ತಿಯುಳ್ಳ ಚಿಂತನೆಗಳ ಮಹಾಪೂರ! ತನ್ನ ಸಿದ್ಧಾಂತಗಳಿಗೆ ವೇದಿಕೆಗಳನ್ನು ವಿಸ್ತರಿಸುತ್ತಲೇ ಹೋದ ಕೋಮ್ಟ್ ಆರ್ಥಿಕ, ದೈಹಿಕ, ವೈಯಕ್ತಿಕ ಅಧ:ಪತನದ ಪಾತಾಳಕ್ಕಿಳಿದರೂ ಮಾವವತೆಯ ದೀವಟಿಗೆಯನ್ನು ಪ್ರಕ್ಷುಬ್ಧ ಸಮಾಜದ ಮೇಲೆ ಎತ್ತಿ ಹಿಡಿದು ಸಾಗಿದ... ಕೋಮ್ಟ್ ಅಮರನಾದ!
.......... ಇನ್ನೂ ಇದೆ (ಮುಂದಿನ ಕಂತು- ಕೋಮ್ಟ್ ನ ಸಿದ್ಧಾಂತ)

Friday, February 20, 2009

ತುಂಡು ಬೀಡಿ ಮತ್ತು ಕ್ರಾಂತಿ!

ಚಿಮಣಿ ದೀಪ ಕರ್ರಗಿನ ಹೊಗೆ ಉಗುಳುತ್ತಲೇ ಆ ಮುದುಕ ಬೀಡಿಗೆ ಬೆಂಕಿ ಹಚ್ಚಿದ. ಅಂತಹ ಅಪರಾತ್ರಿಯಲ್ಲೂ ನನ್ನ ಆಗಮನ ಆತನನ್ನು ಚೂರೂ ವಿಚಲಿತಗೊಳಿಸಲಿಲ್ಲ. ಚಿಮಿಣಿ ದೀಪದಂತೆಯೇ ಆತ ಕೂಡ ತನ್ನ ಪಾಡಿಗೆ ತಾನು ಬೀಡಿ ಸೇದುವುದರಲ್ಲೇ ತಲ್ಲೀನನಾಗಿದ್ದ. ಮೈ ಮುಟ್ಟಿದರೆ ಕೆಂಡದಂತೆ ಬಿಸಿ. ಜ್ವರ ಬಂದರೂ ಬೀಡಿ ಸೇದಿಯೇ ಸಾಯ್ಬೇಕಾ? ಎಂದರೂ ಮಾತಿಲ್ಲ, ಕತೆಯಿಲ್ಲ.

ಈಗ ಅವನೂ ಇಲ್ಲ...

ಇಷ್ಟಕ್ಕೂ ಅವನ್ಯಾರೋ, ನಾನ್ಯಾರೋ... ಬದುಕಿನ ಮಹಾಸಂಗ್ರಾಮದಲ್ಲಿ ಹೋರಾಡುತ್ತಿದ್ದ ನನಗೆ ಅಚಾನಕ್ ಸಿಕ್ಕಿದ್ದ ಆತ, ಕೊನೆಯವರೆಗೂ ನನ್ನ ಬೌದ್ಧಿಕ ಬದುಕಿಗೆ ಆಪ್ತನಾದ. ತುತ್ತಿಗೂ ತತ್ವಾರಪಡುತ್ತಿದ್ದರೂ ದೇವರಿಲ್ಲದ ಹೊಸ ಆಧ್ಯಾತ್ಮದ ಚಿಂತನೆಗಳನ್ನು ನನ್ನೊಳಗೆ ಮೂಡಿಸಿ ಅರ್ಧದಲ್ಲೇ ಮರೆಯಾದ, ನಾನು ಕತ್ತಲಾವರಿಸಿದಂತೆ ಗೊಂದಲಕ್ಕೊಳಗಾಗುತ್ತೇನೆ. ಚಿಮಣಿ ದೀಪದ ಹೊಗೆಯ ನೆನಪು ನನ್ನನ್ನು ಭೀಕರವಾಗಿ ಕಾಡುತ್ತಿದೆ.

ನನ್ನ ಗಡ್ದ ಎಳೆದು ಕಾರ್ಲ್ ಮಾರ್ಕ್ಸ್ ಎಂದು ಬೊಚ್ಚು ನಗೆ ನಕ್ಕವನು, ಲೆನಿನ್ ನಂತೆ ಕ್ರಾಂತಿ ಮಾಡ್ಬೇಕು ನೋಡು ಅಂದವನು, ಬಡವರು ಬಂಡವಾಳಶಾಹಿ ಸಮಾಜ ಕೆಡುಹುವ ಸೈನಿಕರು ಎನ್ನುತ್ತಲೇ ನಿನ್ನೆಯ ಹಳಸಲು ಅನ್ನಕ್ಕೆ ಕೈ ಹಾಕಿದವನು... ತೊಲಗು, ನೀನು ಕೂಡ ಬಂಡವಾಳಶಾಹಿಯೇ ಎಂದು ಕಂಬಳಿ ಹೊದ್ದು ಮಲಗಿದವನು, ಈಗ ಅಪರಾತ್ರಿಗಳಲ್ಲಿ ನನ್ನ ಕನಸಿಗೆ ಲಗ್ಗೆ ಇಡುತ್ತಿದ್ದಾನೆ...

ಅವನಲ್ಲಿ ಅಗಾಧ ಚಿಂತನೆಯಿತ್ತು. ಮಾತಿನಲ್ಲಿ ವಿಕ್ಷಿಪ್ತ ಸೆಳೆತವಿತ್ತು. ಅವನಾಡಿದ ಪ್ರತಿ ಮಾತು ಕೇಳಿದವರ ಎದೆಯಲ್ಲಿ ಮತ್ತೆ ಮತ್ತೆ ಮಾರ್ದನಿಸುವಂತಿತ್ತು. ನಗರೀಕರಣದ ಬಗ್ಗೆ, ಬಂಡವಾಳಶಾಹಿತ್ವದ ಬಗ್ಗೆ ಕೆಂಡದಂತೆ ಕಿಡಿ ಕಾರುತ್ತಿದ್ದ. ಆಧ್ಯಾತ್ಮವೂ ಒಂದರ್ಥದಲ್ಲಿ ತತ್ವಜ್ನಾನವೇ, ದೇವರ ನಂಬಿಕೆ ಇಲ್ಲದೆಯೇ ತಪಸ್ಸು ಮಾಡಲೂಬಹುದು ಎನ್ನುತ್ತಿದ್ದ... ಇದ್ದಕ್ಕಿದ್ದಂತೆ ಧ್ಯಾನಸ್ಥನಾಗುತ್ತಿದ್ದ...

ಒಂಟಿ ಬದುಕಿನಲ್ಲಿ ಬೀಡಿಯೇ ಸರ್ವಸ್ವ ಆತನಿಗೆ. ಬೀಡಿ ಖರ್ಚಾದರೆ ಹಿಂದೆ ಕೂಡಿಸಿಟ್ಟ ತುಂಡು ಬೀಡಿಗೇ ಬೆಂಕಿ ಹಚ್ಚುತ್ತಿದ್ದ. ನನ್ನ ಪ್ರತಿ ಭೇಟಿಯಲ್ಲೂ ಅವನಿಗಾಗಿ ಒಂದು ಕಟ್ಟು ಬೀಡಿ ನನ್ನ ಕಿಸೆಯಲ್ಲಿರುತ್ತಿತ್ತು. ಯಾರಿಂದಲೂ ಸಹಾಯ ಬೇಡದ, ಕೊಟ್ಟರೂ ಪಡೆಯದ ಮಹಾನ್ ಸ್ವಾಭಿಮಾನಿ. ಅವನ ಪೂರ್ವಾಪರ ನನಗೆ ಗೊತ್ತಿಲ್ಲದಿದ್ದರೂ ಅವನಾಗಿ ಎಂದೂ ಬಾಯಿ ಬಿಟ್ಟವನಲ್ಲ. ಬರಿದೇ ಹೊಟ್ಟೆಯಲ್ಲಿ ಹತ್ತಾರು ದಿನ ಕಳೆಯಬಲ್ಲ ಹಠಯೋಗಿ.

ಸುಮಾರು ಎಪ್ಪತ್ತೈದು ವರ್ಷ ವಯಸ್ಸಿನ, ನಾನು ನೋಡಿದಂದಿನಿಂದಲೂ ಪಾತಾಳದಂತಹ ಬಡತನದಲ್ಲೇ ಬದುಕಿದ, ಚಿಂತನೆಗಳ ಮೂಟೆಯಂತಿದ್ದ, ಕ್ರಾಂತಿಯ ಸೈನಿಕನಂತಿದ್ದ, ಸಜ್ಜನ, ನಿಗರ್ವಿ, ಸಾತ್ವಿಕ ವ್ಯಕ್ತಿತ್ವದ ಪ್ರತಿರೂಪದಂತಿದ್ದ, ನೋಡಿದವರ ಪಾಲಿಗೆ ಭಿಕಾರಿಯಂತಿದ್ದ ಆ ಮುದುಕ ಎಲ್ಲರೊಡನಿದ್ದೂ ಇನ್ನಿಲ್ಲವಾದ.. ಕ್ರಾಂತಿ ಮಂತ್ರ ಜಪಿಸುತ್ತಲೇ ಏನನ್ನೂ ಸಾಧಿಸದೇ ಹೊರಟು ಹೋದವನ ಬಗ್ಗೆ ನನಗೆ ಕೋಪವಿದೆ.

ಈಗ ನನ್ನ ಬಾಂಧವರು ಜೊತೆಗಿದ್ದರೂ ಅವನ ಇರುವಿಕೆಯಿಲ್ಲದೆ ಕಂಗಾಲಾಗುತ್ತೇನೆ. ಅವನ ಸುಕ್ಕುಗಟ್ಟಿದ ಮೈ, ಮೋಟು ಬೀಡಿ, ನಿರಿಗೆಯ ಹಣೆ, ಅಚ್ಚ ಬಿಳುಪಿನ ಕಣ್ಣುಗಳು, ಗುಳಿ ಬಿದ್ದ ಕೆನ್ನೆ, ಉಗುರೇ ಇಲ್ಲದ ಹೆಬ್ಬೆರಳು... ನಿದ್ರೆ ಕಾಣದ ರಾತ್ರಿಗಳಲ್ಲಿ ನನ್ನ ಮನಸ್ಸನ್ನು ಚಿಂದಿಗೊಳಿಸುತ್ತಿವೆ... ಆದರೆ, ಸ್ವಾರ್ಥವಿಲ್ಲದ ಅವನ ಧ್ಯೇಯಗಳು, ಜೀವನದ ಸಂಧ್ಯಾಕಾಲದಲ್ಲೂ ತನ್ನ ಸಿದ್ಧಾಂತಗಳಿಗೇ ಬದ್ಧನಾದ ಅವನ ಚಿಂತನೆಗಳು ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿದೆ. ಈಗೀಗ ಯೋಚಿಸಿದರೆ... ಅವನು ತನ್ನ ಗುರಿ ಸಾಧಿಸಿಯೇ ಹೊರಟುಹೋಗಿದ್ದಾನೆ ಎನ್ನುವುದು ಖಚಿತವಾಗಿದೆ, ನಾನು ಹಳೆಯ ಇತಿಹಾಸದ ವರ್ಗಸಂಘರ್ಷದ ಪುಟಗಳನ್ನು ತಿರುವಿಹಾಕುತ್ತೇನೆ...

ಇಷ್ಟಕ್ಕೇ ನಾನು ಅವನಿಗೆ ರುಣಿ.

Wednesday, February 18, 2009

ಹಳೇ ಬೇರು, ಹೊಸ ಚಿಗುರು...

ಹರಿದು ಚಿಂದಿಯಾಗಿ ಬಿದ್ದಿದ್ದ ರಸ್ತೆಗೇ ಆಸರೆಯೆಂಬಂತೆ ಏರು ಹಾದಿಯತ್ತ ಸಾಗಿತ್ತು ಪಯಣ. ಬಹುಶ: ಹತ್ತಿಪ್ಪತ್ತು ಹೆಜ್ಜೆ ಕ್ರಮಿಸಿದ್ದಷ್ಟೇ. ಕೆಳಹೊಟ್ಟೆಯ ಎಡಭಾಗ ಗಬಕ್ಕನೇ ಹಿಂಡಿದಂತಾಯ್ತು.. ಒಮ್ಮಿಂದೊಮ್ಮೆಗೆ ಲೋಕವೆಲ್ಲ ಕತ್ತಲು, ಸೆಟೆದು ನೇರವಾಗಿ ನಿಲ್ಲಲಾಗುತ್ತಿಲ್ಲ. ಬೆನ್ನುಮೊಳೆ ಬಾಗುತ್ತಿದ್ದಂತೆ ಕಾಲುಗಳು ಕುಸಿದವು. ಎಲ್ಲಿಂದಲೋ ಭರ್ರನೆ ಬಂದ ಬಿಳಿ ಕಾರು ಬಲ ತೋಳನ್ನು ತರಚಿಕೊಂಡೇ ತಗ್ಗಿನತ್ತ ಎಗ್ಗಿಲ್ಲದೆ ಸಾಗಿತು.. ‘ನೀರು ನೀರು’ ಎಂದವನ ಧ್ವನಿ ದಿಗಂತದಲ್ಲಿ ಲೀನ... ಕಣ್ಣಿಗೆ ಜೊಂಪು..

*******

ಧಿಗ್ಗನೆ ಎಚ್ಚರವಾಯ್ತು! ಕಣ್ಣು ಬಿಟ್ಟರೆ ಅನಂತ ನೀಲ ಆಗಸ.. ಬದಿಯಲ್ಲಿದ್ದ ಯಾರೋ ದೊಡ್ಡದಾಗಿ ಬಯ್ಯುತ್ತಿರುವುದು ಅಸ್ಪಷ್ಟವಾಗಿ ಕಿವಿಗೆ ಬಡಿಯುತ್ತಿದೆ... ಜನ ಕಣ್ಣಿಗೆ ಬಟ್ಟೆ ಕಟ್ಟಿದ ಇರುವೆಗಳಂತೆ ಬಿರಬಿರನೆ ಹೋಗುತ್ತಿದ್ದಾರೆ.. ಕಾರು, ಬೈಕು, ಲಾರಿ, ರಿಕ್ಷಾ ಅತ್ತಿಂದಿತ್ತ ಭುಸುಗುಡುತ್ತ ಸಾಗುತ್ತಿವೆ.. ರಸ್ತೆ ಬದಿಯ ಧೂಳಿನಲ್ಲಿ ಅಂಗಾತ ಬಿದ್ದಿದ್ದ ದೇಹ ಗಬಕ್ಕನೆ ಎದ್ದು ಕುಳಿತಿತು- ಅಖಂಡ ಲೋಕದಲ್ಲಿ ತಾನೊಬ್ಬನೇ ಭಿಕಾರಿ ಎಂಬಂತೆ...

ಮತ್ತೆ ನೋವು!

ಬರೋಬ್ಬರಿ ಆರು ದಿನಗಳ ಹಿಂದಿನವರೆಗೂ ಕಾಡದ ಹಸಿವೆಯ ನೋವು! ಸುತ್ತ ನೋಡಿದರೆ ಹಣ್ಣಿನಂಗಡಿ, ಐಷಾರಾಮಿ ಹೊಟೇಲು, ಚಾಕಲೇಟು ಡಬ್ಬಗಳು, ಸಿಹಿತಿಂಡಿ, ಆಮ್ಲೇಟು, ಪಾನಿಪೂರಿ! ಧೂಳೂ ಹಿಡಿದಿದ್ದ ಬಿಳಿ ಬಣ್ಣದ ಕಪ್ಪು ನೇರ ಗೆರೆಯ ಅಂಗಿ ಕಿಸೆಯನ್ನು ಬೆರಳುಗಳು ತಡಕಾಡಿದವು.. ಅಲ್ಲೇನಿದೆ ಮಣ್ಣು? ಕಿಸೆ ಬೆತ್ತಲಾಗಿ ನಗುತ್ತಿದೆ! ಸ್ಥಿಮಿತ ಕಳೆದುಕೊಂಡ ದೇಹ ಆದದ್ದಾಗಲಿ ಎಂದು ಎದುರಿದ್ದ ಹೊಟೇಲಿಗೆ ನುಗ್ಗಿತು. ಇನ್ನೇನು ಲೋಟ ಎತ್ತಿ ನೀರು ಕುಡೀಬೇಕು ಎನ್ನುವಷ್ಟರಲ್ಲಿ ದಪ್ಪ ಮೀಸೆಯ ದಡೂತಿ ಆಸಾಮಿ ನಡಿ ಹೊರಗೆ ಎಂದುಬಿಟ್ಟ!

********

ತಣ್ಣನೆಯ ಗಾಳಿಗೆ ಮೇಫ್ಲವರ್ ಮರದ ಎಲೆಗಳು ತಲೆದೂಗುತ್ತಿವೆ... ಮರದ ಕಟ್ಟೆ ಮೇಲೆ ಪವಡಿಸಿದ್ದೇ ಬೆನ್ನಿಗಂಟಿದ್ದ ಹೊಟ್ಟೆ, ಪಾತಾಳಕ್ಕಿಳಿದಿದ್ದ ಹಸಿವು ಮಿಂಚಿನಂತೆ ಮರೆಯಾಗಿ ಮನಸ್ಸು ಆಸ್ಫೋಟಿಸಿತು... ಜಗತ್ತಿಗೇ ಧಿಕ್ಕಾರ ಕೂಗಿತು!

*******

ಅದೇ ಬೀದಿಯಲ್ಲಿ ದಾಪುಗಾಲಿಡುತ್ತ ಸಾಗಿದ ಬದುಕಿನ ಚಿಂದಿ ಚಿಂದಿ ಸಾಲುಗಳೀಗ ಸುಂದರ ಕವನವಾಗಿದೆ. ಅರೆರೇ! ಅಗೋ... ಮತ್ತದೇ ಬೀದಿಯಲ್ಲಿ ಯಾರೋ ನರಳುತ್ತಿರುವ ಸದ್ದು ಕೇಳಿಸುತ್ತಿದೆ! ಹಸಿವಿನ ಆಕ್ರಂದನ... ಅದೆಷ್ಟೋ ವರ್ಷಗಳ ಹಿಂದೆ ಅನುಭವಿಸಿದ ನೋವು ಈಗ ಮತ್ತಾರನ್ನೋ ಕಾಡುತ್ತಿದೆ! ಅದೇ ಜನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಹೋಗುತ್ತಿದ್ದಾರೆ.. ಸುತ್ತಲೂ ಅದೇ ಹಣ್ಣಿನಂಗಡಿ, ಐಷಾರಾಮಿ ಹೊಟೇಲು, ಚಾಕಲೇಟು ಡಬ್ಬಗಳು, ಸಿಹಿತಿಂಡಿ, ಆಮ್ಲೇಟು, ಪಾನಿಪೂರಿ! ಐಷಾರಾಮಿ ಹೊಟೇಲಿನ ಧಡೂತಿ ವ್ಯಕ್ತಿ ಬಾಗಿಲ ಬಳಿಯಲ್ಲೇ ನಿಂತಿದ್ದಾನೆ... ಸಣಕಲು ದೇಹ ಮಾತ್ರ ಅಂಗಾತ ಬಿದ್ದಿದೆ...

ಧಿಕ್ಕಾರ! ಮನುಷ್ಯನ ನಿರ್ದಯತೆಗೆ, ದರ್ಪಕ್ಕೆ, ಕ್ರೌರ್ಯಕ್ಕೆ, ಅಧಿಕಾರದ ಮದೋನ್ಮತ್ತತೆಗೆ, ಅಹಂಕಾರಕ್ಕೆ, ಬಂಡವಾಳಶಾಹಿತ್ವಕ್ಕೆ, ದೇಶದ ವ್ಯವಸ್ಥೆಗೆ, ಕೊನೆಗೆ ಅಸಹಾಯಕತೆಗೂ!