Friday, February 20, 2009

ತುಂಡು ಬೀಡಿ ಮತ್ತು ಕ್ರಾಂತಿ!

ಚಿಮಣಿ ದೀಪ ಕರ್ರಗಿನ ಹೊಗೆ ಉಗುಳುತ್ತಲೇ ಆ ಮುದುಕ ಬೀಡಿಗೆ ಬೆಂಕಿ ಹಚ್ಚಿದ. ಅಂತಹ ಅಪರಾತ್ರಿಯಲ್ಲೂ ನನ್ನ ಆಗಮನ ಆತನನ್ನು ಚೂರೂ ವಿಚಲಿತಗೊಳಿಸಲಿಲ್ಲ. ಚಿಮಿಣಿ ದೀಪದಂತೆಯೇ ಆತ ಕೂಡ ತನ್ನ ಪಾಡಿಗೆ ತಾನು ಬೀಡಿ ಸೇದುವುದರಲ್ಲೇ ತಲ್ಲೀನನಾಗಿದ್ದ. ಮೈ ಮುಟ್ಟಿದರೆ ಕೆಂಡದಂತೆ ಬಿಸಿ. ಜ್ವರ ಬಂದರೂ ಬೀಡಿ ಸೇದಿಯೇ ಸಾಯ್ಬೇಕಾ? ಎಂದರೂ ಮಾತಿಲ್ಲ, ಕತೆಯಿಲ್ಲ.

ಈಗ ಅವನೂ ಇಲ್ಲ...

ಇಷ್ಟಕ್ಕೂ ಅವನ್ಯಾರೋ, ನಾನ್ಯಾರೋ... ಬದುಕಿನ ಮಹಾಸಂಗ್ರಾಮದಲ್ಲಿ ಹೋರಾಡುತ್ತಿದ್ದ ನನಗೆ ಅಚಾನಕ್ ಸಿಕ್ಕಿದ್ದ ಆತ, ಕೊನೆಯವರೆಗೂ ನನ್ನ ಬೌದ್ಧಿಕ ಬದುಕಿಗೆ ಆಪ್ತನಾದ. ತುತ್ತಿಗೂ ತತ್ವಾರಪಡುತ್ತಿದ್ದರೂ ದೇವರಿಲ್ಲದ ಹೊಸ ಆಧ್ಯಾತ್ಮದ ಚಿಂತನೆಗಳನ್ನು ನನ್ನೊಳಗೆ ಮೂಡಿಸಿ ಅರ್ಧದಲ್ಲೇ ಮರೆಯಾದ, ನಾನು ಕತ್ತಲಾವರಿಸಿದಂತೆ ಗೊಂದಲಕ್ಕೊಳಗಾಗುತ್ತೇನೆ. ಚಿಮಣಿ ದೀಪದ ಹೊಗೆಯ ನೆನಪು ನನ್ನನ್ನು ಭೀಕರವಾಗಿ ಕಾಡುತ್ತಿದೆ.

ನನ್ನ ಗಡ್ದ ಎಳೆದು ಕಾರ್ಲ್ ಮಾರ್ಕ್ಸ್ ಎಂದು ಬೊಚ್ಚು ನಗೆ ನಕ್ಕವನು, ಲೆನಿನ್ ನಂತೆ ಕ್ರಾಂತಿ ಮಾಡ್ಬೇಕು ನೋಡು ಅಂದವನು, ಬಡವರು ಬಂಡವಾಳಶಾಹಿ ಸಮಾಜ ಕೆಡುಹುವ ಸೈನಿಕರು ಎನ್ನುತ್ತಲೇ ನಿನ್ನೆಯ ಹಳಸಲು ಅನ್ನಕ್ಕೆ ಕೈ ಹಾಕಿದವನು... ತೊಲಗು, ನೀನು ಕೂಡ ಬಂಡವಾಳಶಾಹಿಯೇ ಎಂದು ಕಂಬಳಿ ಹೊದ್ದು ಮಲಗಿದವನು, ಈಗ ಅಪರಾತ್ರಿಗಳಲ್ಲಿ ನನ್ನ ಕನಸಿಗೆ ಲಗ್ಗೆ ಇಡುತ್ತಿದ್ದಾನೆ...

ಅವನಲ್ಲಿ ಅಗಾಧ ಚಿಂತನೆಯಿತ್ತು. ಮಾತಿನಲ್ಲಿ ವಿಕ್ಷಿಪ್ತ ಸೆಳೆತವಿತ್ತು. ಅವನಾಡಿದ ಪ್ರತಿ ಮಾತು ಕೇಳಿದವರ ಎದೆಯಲ್ಲಿ ಮತ್ತೆ ಮತ್ತೆ ಮಾರ್ದನಿಸುವಂತಿತ್ತು. ನಗರೀಕರಣದ ಬಗ್ಗೆ, ಬಂಡವಾಳಶಾಹಿತ್ವದ ಬಗ್ಗೆ ಕೆಂಡದಂತೆ ಕಿಡಿ ಕಾರುತ್ತಿದ್ದ. ಆಧ್ಯಾತ್ಮವೂ ಒಂದರ್ಥದಲ್ಲಿ ತತ್ವಜ್ನಾನವೇ, ದೇವರ ನಂಬಿಕೆ ಇಲ್ಲದೆಯೇ ತಪಸ್ಸು ಮಾಡಲೂಬಹುದು ಎನ್ನುತ್ತಿದ್ದ... ಇದ್ದಕ್ಕಿದ್ದಂತೆ ಧ್ಯಾನಸ್ಥನಾಗುತ್ತಿದ್ದ...

ಒಂಟಿ ಬದುಕಿನಲ್ಲಿ ಬೀಡಿಯೇ ಸರ್ವಸ್ವ ಆತನಿಗೆ. ಬೀಡಿ ಖರ್ಚಾದರೆ ಹಿಂದೆ ಕೂಡಿಸಿಟ್ಟ ತುಂಡು ಬೀಡಿಗೇ ಬೆಂಕಿ ಹಚ್ಚುತ್ತಿದ್ದ. ನನ್ನ ಪ್ರತಿ ಭೇಟಿಯಲ್ಲೂ ಅವನಿಗಾಗಿ ಒಂದು ಕಟ್ಟು ಬೀಡಿ ನನ್ನ ಕಿಸೆಯಲ್ಲಿರುತ್ತಿತ್ತು. ಯಾರಿಂದಲೂ ಸಹಾಯ ಬೇಡದ, ಕೊಟ್ಟರೂ ಪಡೆಯದ ಮಹಾನ್ ಸ್ವಾಭಿಮಾನಿ. ಅವನ ಪೂರ್ವಾಪರ ನನಗೆ ಗೊತ್ತಿಲ್ಲದಿದ್ದರೂ ಅವನಾಗಿ ಎಂದೂ ಬಾಯಿ ಬಿಟ್ಟವನಲ್ಲ. ಬರಿದೇ ಹೊಟ್ಟೆಯಲ್ಲಿ ಹತ್ತಾರು ದಿನ ಕಳೆಯಬಲ್ಲ ಹಠಯೋಗಿ.

ಸುಮಾರು ಎಪ್ಪತ್ತೈದು ವರ್ಷ ವಯಸ್ಸಿನ, ನಾನು ನೋಡಿದಂದಿನಿಂದಲೂ ಪಾತಾಳದಂತಹ ಬಡತನದಲ್ಲೇ ಬದುಕಿದ, ಚಿಂತನೆಗಳ ಮೂಟೆಯಂತಿದ್ದ, ಕ್ರಾಂತಿಯ ಸೈನಿಕನಂತಿದ್ದ, ಸಜ್ಜನ, ನಿಗರ್ವಿ, ಸಾತ್ವಿಕ ವ್ಯಕ್ತಿತ್ವದ ಪ್ರತಿರೂಪದಂತಿದ್ದ, ನೋಡಿದವರ ಪಾಲಿಗೆ ಭಿಕಾರಿಯಂತಿದ್ದ ಆ ಮುದುಕ ಎಲ್ಲರೊಡನಿದ್ದೂ ಇನ್ನಿಲ್ಲವಾದ.. ಕ್ರಾಂತಿ ಮಂತ್ರ ಜಪಿಸುತ್ತಲೇ ಏನನ್ನೂ ಸಾಧಿಸದೇ ಹೊರಟು ಹೋದವನ ಬಗ್ಗೆ ನನಗೆ ಕೋಪವಿದೆ.

ಈಗ ನನ್ನ ಬಾಂಧವರು ಜೊತೆಗಿದ್ದರೂ ಅವನ ಇರುವಿಕೆಯಿಲ್ಲದೆ ಕಂಗಾಲಾಗುತ್ತೇನೆ. ಅವನ ಸುಕ್ಕುಗಟ್ಟಿದ ಮೈ, ಮೋಟು ಬೀಡಿ, ನಿರಿಗೆಯ ಹಣೆ, ಅಚ್ಚ ಬಿಳುಪಿನ ಕಣ್ಣುಗಳು, ಗುಳಿ ಬಿದ್ದ ಕೆನ್ನೆ, ಉಗುರೇ ಇಲ್ಲದ ಹೆಬ್ಬೆರಳು... ನಿದ್ರೆ ಕಾಣದ ರಾತ್ರಿಗಳಲ್ಲಿ ನನ್ನ ಮನಸ್ಸನ್ನು ಚಿಂದಿಗೊಳಿಸುತ್ತಿವೆ... ಆದರೆ, ಸ್ವಾರ್ಥವಿಲ್ಲದ ಅವನ ಧ್ಯೇಯಗಳು, ಜೀವನದ ಸಂಧ್ಯಾಕಾಲದಲ್ಲೂ ತನ್ನ ಸಿದ್ಧಾಂತಗಳಿಗೇ ಬದ್ಧನಾದ ಅವನ ಚಿಂತನೆಗಳು ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿದೆ. ಈಗೀಗ ಯೋಚಿಸಿದರೆ... ಅವನು ತನ್ನ ಗುರಿ ಸಾಧಿಸಿಯೇ ಹೊರಟುಹೋಗಿದ್ದಾನೆ ಎನ್ನುವುದು ಖಚಿತವಾಗಿದೆ, ನಾನು ಹಳೆಯ ಇತಿಹಾಸದ ವರ್ಗಸಂಘರ್ಷದ ಪುಟಗಳನ್ನು ತಿರುವಿಹಾಕುತ್ತೇನೆ...

ಇಷ್ಟಕ್ಕೇ ನಾನು ಅವನಿಗೆ ರುಣಿ.

1 comment:

  1. ಬರಹ ಶೈಲಿ ತುಂಬಾ ಆಪ್ತವಾಗಿದೆ.

    ReplyDelete